ಪಾರ್ಫಿರಿ
ಸಮರೂಪದ ಒಡಲಿನಲ್ಲಿ ಸ್ಪಟಿಕಗಳು ಸೇರಿಕೊಂಡಿರುವ ಸ್ಥರಾತ್ಮಕವಲ್ಲದ ಶಿಲೆ ಅಥವಾ ಅಗ್ನಿಶಿಲೆ. ಹೊರದೂಡಲ್ಪಟ್ಟ ಕೆಲವು ಬಂಡೆಗಳಿಗೂ ಅಂತಸ್ಸರಣ ಶಿಲೆಗಳಿಗೂ ಈ ಪದವನ್ನು ಅನ್ವಯಿಸಲಾಗಿದೆ.  ಪಾರ್ಫಿರಿ ಎಂಬ ಪದ ಪಾರ್ಫಿರೈಟ್ ಎಂಬ ಹೆಸರಿನ ಹಳೆಯ ಶಿಲೆಯಿಂದ ಬಂದಿದೆ.  ಕೆನ್ನೀಲಿ ಅಥವಾ ಊದಾ ಬಣ್ಣ ಎಂಬುದು ಇದರ ಅರ್ಥ.  ರೂಪಾಂತರ ಹೊಂದಿದ ನೇರಿಳೆ ಬಣ್ಣದ ಪಾರ್ಫಿರೈಟ್ ಎಂಬ ಶಿಲೆಗೆ ಮೊತ್ತಮೊದಲು ಪಾರ್ಫಿರಿ ಎಂಬ ಹೆಸರು ಬಂತು.  ತರುವಾಯ ಮೂಲ ರಾಶಿಯಲ್ಲಿ ಸಣ್ಣಸಣ್ಣ ಖನಿಜಗಳು ಇರುವ ಎಡೆಗಳಲ್ಲಿ ದೊಡ್ಡ ದೊಡ್ಡ ಫೆಲ್ಡ್ ಸ್ಟಾರ್ ಖನಿಜಗಳು ಯಾವ ಯಾವ ಶಿಲೆಗಳಲ್ಲಿ ಕಂಡುಬರುವುವೋ ಅಂಥವನ್ನು ಪಾರ್ಫಿರಿ ಎಂದು ಹೆಸರಿಸಿ ಅವನ್ನು ಪಾರ್ಫಿರಿಟಿಕ್ ರಚನೆ ಇರುವ ಶಿಲೆಗಳು ಎಂದು ವಿವರಿಸಲಾಯಿತು.  ಪಾರ್ಫಿರಿಟಿಕ್ ರಚನೆಯುಳ್ಳ ಶಿಲೆಗಳು ಸಾಮಾನ್ಯವಾಗಿ ಮಧ್ಯಂತರ ಶಿಲೆಗಳಲ್ಲಿ ಕಂಡುಬರುತ್ತವೆ.  ಉದಾಹರಣೆಗೆ ಗ್ರಾನೈಟ್ ಪಾರ್ಫಿರಿ, ಸಯನೈಟ್ ಪಾರ್ಫಿರಿ, ಡಯೊರೈಟ್ ಪಾರ್ಫಿರಿ, ಪಾರ್ಫಿರಿಟಿಕ್ ಬೆಸಾಲ್ಟ್ ಇತ್ಯಾದಿ. ಇವನ್ನು ಹೊಳಪುಗೊಳಿಸಿ ಕಟ್ಟಡಗಳಲ್ಲಿ ಅಲಂಕಾರ ಶಿಲೆಗಳಿಗಾಗಿ ಬಳಸುತ್ತಾರೆ.

ಪಾರ್ಫಿರಿಟಿಕ್ ರಚನೆ: ಇದರ ಪೈಕಿ ಅತೀ ಮುಖ್ಯವಾದದ್ದೆಂದರೆ ಸ್ಪಟಿಕಗಳ ಬೆಳವಣಿಗೆಗೆ ಪೂರಕವಾದ ಭೌತ ರಾಸಾಯನಿಕ ಪರಿಸ್ಥಿತಿಗಳಲ್ಲಿ ಉಂಟಾಗುವ ಕೆಲವು ಬದಲಾವಣೆಗಳು. ಮ್ಯಾಗ್ಮಾದಲ್ಲಿ ದೊಡ್ಡ ದೊಡ್ಡ ಸ್ಪಟಿಕಗಳ ಬೆಳವಣಿಗೆಗೆ ಕಾರಣವಾದ ಆಧಿಕ ಒತ್ತಡವಿರುತ್ತದೆ.  ಅಲ್ಲದೆ, ಮ್ಯಾಗ್ಮಾ ನಿಧಾನವಾಗಿ ತಣ್ಣಗಾಗುವ ಪರಿಸ್ಥಿತಿಗಳಿರುವ ಆಳವಾದ ಪ್ರದೇಶಗಳಲ್ಲಿ ಕೂಡ ದೊಡ್ಡ ಅಳತೆಯ ಸ್ಪಟಿಕಗಳು ಬೆಳೆಯಲಾರಂಭಿಸುತ್ತವೆ.  ಸ್ಪಟಿಕಗಳನ್ನು ಒಳಗೊಂಡ ಈ ಮ್ಯಾಗ್ಮಾ ಹಠಾತ್ತನೆ ಮೇಲ್ಮಟ್ಟಕ್ಕೆ ಸ್ಥಳಾಂತರಗೊಂಡು ಭೂ ತೊಗಟಿಗೆ ನುಗ್ಗುವುದರಿಂದ ಅಥವಾ ಅದು ಮೇಲ್ಭಾಗಕ್ಕೆ ಚಾಚುವುದರಿಂದ ಪಾರ್ಫಿರಿಟಿಕ್ ರಚನೆಗೆ ಕಾರಣವಾಗುವುದು.  ಕ್ರಮೇಣ ಒತ್ತಡ ಕುಂದುವುದರಿಂದ, ಬಾಷ್ಪಗುಣಗಳುಳ್ಳ ವಸ್ತುಗಳು ಅಧಿಕ ಮೊತ್ತದಲ್ಲಿ ನಷ್ಟ ಹೊಂದುತ್ತವೆ.  ಆಗ ಮ್ಯಾಗ್ಮಾ ಹೆಚ್ಚು ಜಿಗುಟಾಗುತ್ತದೆ.  ಸಣ್ಣ ಸ್ಪಟಿಕಗಳು ಅಧಿಕ ಪ್ರಮಾಣದಲ್ಲಿದ್ದು ಅಸ್ಪಟಿಕಾವಸ್ಥೆಯಲ್ಲಿರುವ ಖನಿಜಗಳ ಮೂಲ ರಾಶಿಯ ರಚನೆಗೆ ಕಾರಣವಾಗುತ್ತವೆ.  ಈ ಮುಂಚೆಯೇ ರೂಪುಗೊಂಡಿದ್ದ ಸ್ಪಟಿಕಗಳಿಗೆ ಇವು ಮೂಲ ರಾಶಿಯನ್ನೂ ಒದಗಿಸುತ್ತವೆ.  ಹೀಗೆ ಲಾವಾಗಳಲ್ಲಿ ಮತ್ತು ಇನ್ನೂ ಅನೇಕ ವಿಧವಾದ ಸಣ್ಣ ಸಣ್ಣ ಅಂತಸ್ಸರಣ ಶಿಲೆಗಳಲ್ಲಿ ಪಾರ್ಫಿರಿಟಿಕ್ ರಚನೆಯನ್ನು ಕಾಣಬಹುದು. 
(ಎಂ.ಎಸ್.ವಿ.;ಜಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ